ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳ:ವಿಶ್ವವನ್ನೇ ಬೆಳಗಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಗುರುವಿನ ಮಹತ್ವವನ್ನು ಜಗತ್ತಿಗೆ ಎತ್ತಿ ಹಿಡಿದ ಮಹಾನ್ ಚೇತನ,” ಎಂದು ಶಿಕ್ಷಕ ಸಂಗಮೇಶ ಶಾಂತಪ್ಪ ನವಲಿ ಹೇಳಿದರು.
ತಾಲ್ಲೂಕಿನ ನಾಲತವಾಡ ಪಟ್ಟಣದ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವೇಷಧಾರಿಯಾಗಿ ಸಂಭ್ರಮಿಸಿ, ಮಾತನಾಡುತ್ತಿದ್ದರು. ಇದೇ ಸುದಿನದಂದು ಅಂಬೇಡ್ಕರ್ ಶಾಲೆಯ ಶಿಕ್ಷಕರಾಗಿ ಸೇವೆಗೆ ಹಾಜರಾದ ಸಂಗಮೇಶ ನವಲಿ ಅವರು, ಅಂಬೇಡ್ಕರ್ ಅವರ ಗೌರವಾರ್ಥವಾಗಿ ದಲಿತ ಸಂಘರ್ಷ ಸಮಿತಿ ಬಳಗದವರಿಗೆ, ಶಾಲಾ ಸಿಬ್ಬಂದಿ ಹಾಗೂ ಗ್ರಾಮದ ಗುರುಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸಂಪನ್ಮೂಲ ಭರಿತ ಶಿಕ್ಷಕರ ಆಗಮನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗುಂಡಪ್ಪ ಚಲವಾದಿ ಮಾತನಾಡಿ, “ಅಂಬೇಡ್ಕರ್ ಜಯಂತಿಯಂದೇ ಅಂಬೇಡ್ಕರ್ ನಗರದ ಶಾಲೆಗೆ ಸಂಗಮೇಶ ನವಲಿ ಅವರಂತಹ ಕ್ರಿಯಾಶೀಲ ಶಿಕ್ಷಕರು ನಿಯೋಜನೆಗೊಂಡಿರುವುದು ಆ ಸಾಕ್ಷಾತ್ ಅಂಬೇಡ್ಕರ್ ಅವರೇ ನಮಗೆ ನೀಡಿದ ಆಶೀರ್ವಾದದಂತಿದೆ. ಇವರ ಶೈಕ್ಷಣಿಕ ಸೇವೆಗೆ ಗ್ರಾಮಸ್ಥರ ಹಾಗೂ ಎಸ್‌ಡಿಎಂಸಿ ಮಂಡಳಿಯ ಸಂಪೂರ್ಣ ಸಹಕಾರವಿದೆ,” ಎಂದರು.
ಕ್ರಿಯಾಶೀಲ ವ್ಯಕ್ತಿತ್ವ
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎ.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಸಂಗಮೇಶ ನವಲಿ ಅವರು ವಾಲಿಶೆಟ್ಟಿ ಶರಣಪ್ಪ ಶಿಕ್ಷಕರಿಂದ ಪ್ರೇರಣೆ ಪಡೆದವರು. ಅವರು ಹೋದಲ್ಲೆಲ್ಲ ತಮ್ಮ ತನು-ಮನ-ಧನದಿಂದ ಶಾಲೆಯ ಮತ್ತು ಊರಿನ ಜನರ ಏಳಿಗೆಗಾಗಿ ಶ್ರಮಿಸುವ ಗುಣ ಹೊಂದಿದ್ದಾರೆ, ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಗಂಗಪ್ಪ ಲೊಟಗೇರಿ, ಶಂಕರಪ್ಪ ನವಲಿ, ಲಕ್ಷ್ಮಣ ಶಿವಪ್ಪ ನವಲಿ, ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಜಿ. ಬಿರಾದಾರ, ಮಾಜಿ ಸೈನಿಕ ಪರಶುರಾಮ ಜೋಗಿ, ಮಂಜುನಾಥ ಕಟ್ಟಿಮನಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಡಿ. ಹೊಸಗೌಡ್ರ ಸ್ವಾಗತಿಸಿದರು, ಶಿಕ್ಷಕಿ ರೇಣುಕಾ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅನುಸೂಯಾ ಶಾಂತಪ್ಪ ನವಲಿ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಶಿಕ್ಷಕ ಸಂಗಮೇಶ ನವಲಿ ವಂದಿಸಿದರು.







