ಜನರ ಧ್ವನಿ ನ್ಯೂಸ್
ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರುಪೌರ್ಣಿಮೆ – ಪ್ರಭುಗೌಡ ದೇಸಾಯಿ
ಮುದ್ದೇಬಿಹಾಳ : ಭಾರತ ದೇಶದ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಗುರುವನ್ನು ದೇವರ ಸಮಾನವಾಗಿ ಪೂಜಿಸುವ ಪರಂಪರೆ ನಮ್ಮ ದೇಶದ ವೈಶಿಷ್ಟ್ಯವಾಗಿದೆ. ಗುರುಗಳ ಅಪಾರ ಕೊಡುಗೆಯನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಗುರುಪೌರ್ಣಿಮೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಹೇಳಿದರು.
ಗುರುಪೌರ್ಣಿಮೆ ಅಂಗವಾಗಿ ಪಟ್ಟಣದ ಖಾಸಗಿ ಪಂಕ್ಷನ್ ಹಾಲ್ ನಲ್ಲಿ ಸ್ವತಂತ್ರ ಮಹಿಳಾ ಯೋಗ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗುರು ಎಂದರೆ ಕೇವಲ ಪಾಠ ಹೇಳುವ ಶಿಕ್ಷಕರಷ್ಟೇ ಅಲ್ಲ, ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಕರೆದೊಯ್ಯುವ ಮಾರ್ಗದರ್ಶಿಗಳು, ತಂದೆ-ತಾಯಿ, ಶಿಕ್ಷಕರು ಸೇರಿದಂತೆ ಜೀವನದಲ್ಲಿ ಉತ್ತಮ ದಾರಿಯನ್ನು ತೋರಿಸುವ ಪ್ರತಿಯೊಬ್ಬರೂ ಗುರುಗಳೇ ಎಂದರು.
ಯೋಗದಿಂದ ರೋಗ ಮುಕ್ತ ಎನ್ನುವುದು ಕೇವಲ ಮಾತಲ್ಲ. ಅದು ಅಕ್ಷರಶಃ ಸತ್ಯ ಎಂಬುದನ್ನು ನಮ್ಮೂರಿನ ಹೆಮ್ಮೆಯ ಯೋಗ ಶಿಕ್ಷಕಿ ಪ್ರೇಮಾ ಗುಡದಿನ್ನಿ ಅವರು ತಮ್ಮ ಸೇವೆಯ ಮೂಲಕ ಸಾಬೀತುಪಡಿಸಿದ್ದಾರೆ. ನಮ್ಮ ಭಾಗದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ ಉಚಿತವಾಗಿ ಯೋಗಾಭ್ಯಾಸ ಕಲಿಸಿ, ಔಷಧಿಗಿಂತ ಯೋಗವೇ ಉತ್ತಮ ಆರೋಗ್ಯದ ಮಾರ್ಗ ಎಂಬ ಅರಿವು ಮೂಡಿಸುತ್ತಿದ್ದಾರೆ. ನಿಸ್ವಾರ್ಥ ಸೇವೆ, ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಅನೇಕರ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿರುವ ಅವರು ನಿಜವಾದ ಅರ್ಥದಲ್ಲಿ ಗುರುಗಳಾಗಿದ್ದಾರೆ. ಈ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ಅವರ ಸೇವಾಭಾವಕ್ಕೆ ಎಷ್ಟೇ ಅಭಿನಂದನೆ ಸಲ್ಲಿಸಿದರೂ ಅದು ಕಡಿಮೆಯೇ ಎಂದರು.
ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿ ಎಸ್.ಎಂ.ಗುಡದಿನ್ನಿ ಅವರು ಮಾತನಾಡಿ, ಗುರುಪೌರ್ಣಿಮೆ ಕೇವಲ ಒಂದು ಆಚರಣೆಯಲ್ಲ, ಅದು ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಗುರುಗಳ ಮಾರ್ಗದರ್ಶನದ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ ಎಂದರು.
ನನ್ನ ಧರ್ಮಪತ್ನಿ ಪ್ರೇಮಾ ಗುಡದಿನ್ನಿ ಅವರು ಯೋಗಾಭ್ಯಾಸದ ಮೂಲಕ ಗುರುವಿನ ಸ್ಥಾನ ಅಲಂಕರಿಸಿ ಅನೇಕ ತಾಯಂದಿರಿಗೆ ಆರೋಗ್ಯಕರ ಬದುಕಿನ ದಾರಿಯನ್ನು ತೋರಿಸುತ್ತಿರುವುದು ನನಗೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನುಂಟು ಮಾಡಿದೆ. ಅವರ ಈ ನಿಸ್ವಾರ್ಥ ಸೇವೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುದು ನನ್ನ ಹಾರೈಕೆ ಎಂದರು.
ಯೋಗ ಶಿಕ್ಷಕಿ ಪ್ರೇಮಾ ಗುಡದಿನ್ನಿ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯವೇ ನಿಜವಾದ ಸಂಪತ್ತು. ಅದರಲ್ಲೂ ತಾಯಂದಿರು ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಂತ, ಸಂತೋಷಮಯ ಹಾಗೂ ಸದೃಢವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಇದೇ ವೇಳೆ ಯೋಗದಿಂದ ಗುಣಮುಖರಾದ ಅನೇಕ ಮಹಿಳೆಯರು ಮಾತನಾಡಿ ಪ್ರೇಮಾ ಶಾಂತೇಶ ಗುಡದಿನ್ನಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಸಮಿತಿಯ ವತಿಯಿಂದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ, ರೂಪಾ ದೇಸಾಯಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಅನುರಾಧಾ ಪ್ಯಾಟಿಗೌಡರ, ಸುಜಾತಾ ನಾವದಗಿ, ಶಶಿಕಲಾ ಕರೇಕಲ್ಲ, ಬಸಮ್ಮ ಬಿರಾದಾರ, ಸರಸ್ವತಿ ಬಿರಾದಾರ, ಯಮನಮ್ಮ ಕುಂಬಾರ, ನಾಗರತ್ನಾ ಉಡುಪಿ, ರಾಜಶೇಖರ ಮ್ಯಾಗೇರಿ, ರಿತೇಶ ಉಡುಪಿ ಸೇರಿದಂತೆ ಮತ್ತೀತರರು ಇದ್ದರು. ಶಿಕ್ಷಕಿ ಭೂದೇವಿ ಶಿವಶಿಂಪಿ ಪ್ರಾರ್ಥಿಸಿದರು. ಹೇಮಾ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು









