ಜನರ ಧ್ವನಿ ನ್ಯೂಸ್
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಕಾಸಿನಕುಂಟೆ, ಕಾಳಗಿ ಗ್ರಾಮದ ಫಲಾನುಭವಿಗಳಿಗೆ ‘ವಾತ್ಸಲ್ಯ ಮನೆ’ ಹಸ್ತಾಂತರ.
ಮುದ್ದೇಬಿಹಾಳ: ತಾಲೂಕಿನ ಹುಲ್ಲೂರು ವಲಯದ ಕಾಸಿನಕುಂಟೆ ಹಾಗೂ ಕಾಳಗಿ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ‘ವಾತ್ಸಲ್ಯ ಮನೆ’ಗಳನ್ನು ಫಲಾನುಭವಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಕಾಸಿನಕುಂಟೆ ಗ್ರಾಮದ ಫಲಾನುಭವಿ ಕುಮಾರಿ ರೇಣುಕಾ ಮೇಟಿ ಹಾಗೂ ಕಾಳಗಿ ಗ್ರಾಮದ ಬಸ್ಸವ್ವ ಮಾದರ ಅವರಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾ ಯೋಜನಾ ನಿರ್ದೇಶಕ ಮೋಹನ್ ನಾಯಕ ಅವರು ನೆರವೇರಿಸಿದರು.
ಮಾತೃಶ್ರೀ ಹೇಮಾವತಿ ಅಮ್ಮನವರ ಕೊಡುಗೆ ಅಪಾರ:
ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ನಾಯಕ ಅವರು, “ಮಾತೃಶ್ರೀ ಹೇಮಾವತಿ ಅಮ್ಮನವರು ಸಮಾಜದ ಆಶಕ್ತರ ನೆರವಿಗೆ ಸದಾ ಧಾವಿಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಕನಿಷ್ಠ ಸೌಲಭ್ಯಗಳಿಲ್ಲದ ಸುಮಾರು 18,000 ಜನರಿಗೆ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದೆ. ಇದರೊಂದಿಗೆ ವಾಸಕ್ಕೆ ಮನೆ ಇಲ್ಲದವರಿಗಾಗಿ ‘ವಾತ್ಸಲ್ಯ’ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಇದುವರೆಗೆ 25 ಮನೆಗಳನ್ನು ನಿರ್ಮಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ 92 ಮಾಶಾಸನ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 1000 ರೂ. ನೀಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು.
ಕುಮಾರಿ ರೇಣುಕಾ ಮೇಟಿ ಅವರಿಗೆ 1.35 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿದ್ದು, ಊರಿನ ಗ್ರಾಮಸ್ಥರು ಇವರಿಗೆ ಸದಾ ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.
ಯೋಜನೆಯ ಕಾರ್ಯವ್ಯಾಪ್ತಿ ಶ್ಲಾಘನೀಯ:
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಶೈಲ್ ದೊಡ್ಡಮನಿ ಮಾತನಾಡಿ, “ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳ ಯೋಜನೆ ಮಾಡದ ಕಾರ್ಯಕ್ರಮಗಳಿಲ್ಲ ಎಂಬಂತಾಗಿದೆ. ಸಮಾಜದ ಕಟ್ಟಕಡೆಯ ಆಶಕ್ತ ವ್ಯಕ್ತಿಗೂ ಸಂಸ್ಥೆಯ ಸೇವೆ ಮುಟ್ಟುತ್ತಿರುವುದು ಶ್ಲಾಘನೀಯ” ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ., ವಲಯದ ಮೇಲ್ವಿಚಾರಕ ಜಗದೀಶ್, ಕೃಷಿ ಮೇಲ್ವಿಚಾರಕ ದೇವೇಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಜಾತಾ ನಾಯಕ್, ಸಂತೋಷ ಬಾದರಬಂಡಿ,ಧರ್ಮಸ್ಥಳ
ಸೇವಾ ಪ್ರತಿನಿಧಿ ಸಂಗೀತ, ಸಂಘದ ಸದಸ್ಯರು ಹಾಗೂ ಗ್ರಾಮದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.






