ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳದಲ್ಲಿ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಜನ್ಮದಿನಾಚರಣೆ: ಅಶಕ್ತರಿಗೆ ಫಲವಸ್ತು ವಿತರಣೆ
ಮುದ್ದೇಬಿಹಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ವಿವಿಧ ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 92 ಮಾಶಾಸನ ಫಲಾನುಭವಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲ್ಲೂಕು ಯೋಜನಾಧಿಕಾರಿಗಳಾದ ಶಿವಾನಂದ ಪಿ. ಅವರು ಮಾತನಾಡಿ, “ಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕಿನ 92 ಮಂದಿ ಅಶಕ್ತರಿಗೆ ಪ್ರತಿ ತಿಂಗಳು ತಲಾ 1,000 ರೂ.ಗಳಂತೆ ಒಟ್ಟು 92,000 ರೂ. ಮಾಶಾಸನವನ್ನು ನೀಡಲಾಗುತ್ತಿದೆ. ಜನ್ಮದಿನದ ಸವಿ ನೆನಪಿಗಾಗಿ ಇಂದು ಫಲಾನುಭವಿಗಳಿಗೆ ಪೌಷ್ಟಿಕ ಆಹಾರದ ಕಿಟ್ ಹಾಗೂ ನಿತ್ಯ ಬಳಕೆಯ ವಸ್ತುಗಳನ್ನು ನೀಡಲಾಗಿದೆ,” ಎಂದು ವಿವರಿಸಿದರು.
ಇದೇ ವೇಳೆ ತಾಲ್ಲೂಕಿನಲ್ಲಿ ಯೋಜನೆಯಡಿ ನಿರ್ಮಿಸಲಾದ 10 ವಾತ್ಸಲ್ಯ ಮನೆಗಳ ಕುರಿತು ಮಾಹಿತಿ ನೀಡಲಾಯಿತು. ತಮಗೆ ಸಿಗುತ್ತಿರುವ ನಿರಂತರ ಆಸರೆಗಾಗಿ ಫಲಾನುಭವಿಗಳು ಪೂಜ್ಯ ಅಮ್ಮನವರಿಗೆ ಹಾಗೂ ಹೆಗ್ಗಡೆಯವರಿಗೆ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ನಾಗೇಶ್ ಎಸ್. ಕೆ., ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






