ಜನರ ಧ್ವನಿ ನ್ಯೂಸ್ ಗೆ ಸ್ವಾಗತ ನಮಸ್ಕಾರಗಳು
ಮುದ್ದೇಬಿಹಾಳ: ಸಮೀಪದ ಬಸವನಬಾಗೇವಾಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಕ್ಷ ಪ್ರಾಂಶುಪಾಲರಾದ ಡಾ. ಎನ್.ಬಿ. ಹೊಸಮನಿ ಅವರಿಗೆ ಬೆಳಗಾವಿಯ ಪ್ರತಿಷ್ಠಿತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸುವ ಮಹತ್ತರ ಜವಾಬ್ದಾರಿ ಲಭಿಸಿದೆ.
ಈ ಕುರಿತು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಸಂತೋಷ ಕಾಮಗೌಡ ಅವರು ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಡಾ. ಹೊಸಮನಿ ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಕುಂಟೋಜಿ ಗ್ರಾಮದ ಹೆಮ್ಮೆ:
ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದವರಾದ ಇವರು, ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದು, ವಿದ್ಯಾಕ್ಷೇತ್ರದಲ್ಲಿ ಹಂತ-ಹಂತವಾಗಿ ಬೆಳೆದು ಬಂದವರು. ಸದ್ಯ ಇವರು ವಿದ್ಯಾಭಿಷೇಕ ಪರಿಷತ್ ಸದಸ್ಯರಾಗಿ ಹಾಗೂ ಕರ್ನಾಟಕ ಸರ್ಕಾರಿ ಪ್ರಾಧ್ಯಾಪಕರ ಸಂಘದ ವಲಯ ಅಧ್ಯಕ್ಷರಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಈ ನೂತನ ನೇಮಕಕ್ಕೆ ತಾಲ್ಲೂಕಿನ ಜನತೆ, ಶೈಕ್ಷಣಿಕ ವಲಯದ ಗಣ್ಯರು ಹಾಗೂ ಕುಂಟೋಜಿ ಗ್ರಾಮದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ, ಡಾ. ಹೊಸಮನಿ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯವು ಶೈಕ್ಷಣಿಕವಾಗಿ ಮತ್ತಷ್ಟು ಉನ್ನತಿಗೆ ಏರಲಿ ಎಂದು ಆಶಿಸಲಾಗಿದೆ.






