ವಿಜಯಪುರ ಜಿಲ್ಲೆ ಮಕ್ಕಳ ಸಾಹಿತಿಗಳ ತವರೂರು

ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ವಿರಚಿತ ಶರಣ ಸ್ಪುರಣ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.
ವಚನ ಗಾಯನ ಗೋಷ್ಠಿ ನಡೆಸಿಕೊಟ್ಟ ಗಾಯಕರನ್ನು ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಯಿತು.

ಶರಣ ಬೆಳಗು ಹುಣ್ಣಿಮೆಯ ಕಾರ್ಯಕ್ರಮ: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ಸ್ಮರಣೋತ್ಸವ: ಶರಣ ಸ್ಪುರಣ ಲೋಕಾರ್ಪಣೆ
ವಿಜಯಪುರ ಜಿಲ್ಲೆ ಮಕ್ಕಳ ಸಾಹಿತಿಗಳ ತವರೂರು

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮಕ್ಕಳ ಸಾಹಿತಿಗಳ ತವರೂರಾಗಿದೆ. ಶರಣಪ್ಪ ಕಂಚ್ಯಾಣಿ, ಈಶ್ವರ ಚಿಂತಾಮಣಿ, ಶಿಶು ಸಂಗಮೇಶ, ಶರಣಪ್ಪ ಕಂಸಾಳೆ ಸೇರಿ ಹಲವರು ಅನೇಕ ಕೃತಿಗಳನ್ನು ರಚಿಸಿ ಮಕ್ಕಳ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಶರಣಪ್ಪ ಕಂಚ್ಯಾಣೀಯವರ ಮಕ್ಕಳ ಕವನಗಳ ಕಣಜವಂತೂ ಮಕ್ಕಳ ಸಾಹಿತ್ಯಕ್ಕೆ ಅಮೋಘ ಕೊಡುಗೆಯಾಗಿದೆ ಎಂದು ಖ್ಯಾತ ಮಕ್ಕಳ ಸಾಹಿತಿ, ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.

ಇಲ್ಲಿನ ಹುಡ್ಕೋ ಬಡಾವಣೆಯಲ್ಲಿರುವ ಶರಣ ಸಂಗಣ್ಣ ಕಂಚ್ಯಾಣಿ ಅವರ ನಿವಾಸ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ರವಿವಾರ ಸಂಜೆ ಏರ್ಪಡಿಸಿದ್ದ ಶರಣ ಬೆಳಗು ಹುಣ್ಣಿಮೆಯ ಕಾರ್ಯಕ್ರಮ, ಶರಣಪ್ಪ ಕಂಚ್ಯಾಣಿಯವರ ಸ್ಮರಣೋತ್ಸವ, ಶರಣ ಸ್ಪುರಣ ಗ್ರಂಥ ಲೋಕಾರ್ಪಣೆ, ವಿಚಾರ ಸಂಕಿರಣ ಸಂಯುಕ್ತ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಇಡೀ ರಾಜ್ಯದಲ್ಲಿ ಶರಣ ಸಾಹಿತ್ಯದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತಿದೆ. ಇಂಥ ಕಾರ್ಯಕ್ರಮಗಳ ಸಂಘಟನೆಯಲ್ಲಿ ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ತಾಲೂಕು ಘಟಕಗಳು ಮುಂಚೂಣಿಯಲ್ಲಿವೆ. ಇದರು ಮಾದರಿಯಾದದ್ದಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಳಿಕೋಟೆ ತಹಶೀಲ್ದಾರ್ ಡಾ|ವಿನಯಾ ಹೂಗಾರ ಅವರು ಇಂತಹ ವೈಚಾರಿಕ ಕಾರ್ಯಕ್ರಮಗಳು ಎಲ್ಲರ ಬಾಳಿಗೆ ಬೆಳಕನ್ನು ಕೊಡುವಂಥವುಗಳು ಎಂದರು.
ಜಂಬುನಾಥ ಕಂಚ್ಯಾಣಿಯವರ ಶರಣ ಸ್ಪುರಣ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಸಿ.ಬಿ.ಇಟಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯಕ್ಕೂ ಹೆಚ್ಚಿನ ಆದ್ಯತೆ ಸಿಗಲು ಜಿಲ್ಲೆಯ ಮಕ್ಕಳ ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದರು.
ಜಿಲ್ಲಾ ವಚನ ಸಾಹಿತ್ಯ, ಸಾಂಸ್ರ÷್ಕತಿಕ ಪರಿಷತ್ ಅಧ್ಯಕ್ಷ ಅಬ್ದುಲರಹೆಮಾನ ಬಿದರಕುಂದಿ ಅವರು ಚಿಣ್ಣರ ಅಜ್ಜ ಶರಣಪ್ಪ ಕಂಚ್ಯಾಣಿ ವಿಷಯ ಕುರಿತು ಉಪನ್ಯಾಸ ನೀಡುತ್ತ ಮಕ್ಕಳ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿದ್ದ ಶರಣಪ್ಪಜ್ಜ ಅವರದ್ದು ಮಂದಸ್ಮಿತ ಮುಖ, ನೀಟಾದ ಮೂಗು, ಹೊಳೆಯುವ ಕಣ್ಣುಗಳ, ಆಕರ್ಷಕ ಉಡುಪುಗಳಾದ ಶುಭ್ರ ದೋತಿ, ಗಾಂಧಿ ಟೊಪ್ಪಿಗೆ ಸಮೇತ ಸಾಹಿತ್ಯಾತ್ಮಕ ಠೀವಿಯ ವ್ಯಕ್ತಿತ್ವವಾಗಿತ್ತು. ಗುರು, ಲಿಂಗ, ಜಂಗಮರ ಆರಾಧಕರಾಗಿದ್ದ ಅವರು ರಚಿಸಿದ ಚೊಚ್ಚಲ ಕೃತಿ ಅಜ್ಜನ ಹಾಡು ಇಂದಿಗೂ ಅಜರಾಮರವಾಗಿದೆ. ಅವರು ಮಕ್ಕಳ ಸಾಹಿತ್ಯದ ಧೃವತಾರೆಯಂತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ಅವರು ಮಾತನಾಡಿ, ಶಸಾಪ ಕಾರ್ಯಕ್ರಮ ಸಂಘಟಿಸುವಲ್ಲಿ ದಾಸೋಹಿಗಳ ಪಾತ್ರ ಅಮೋಘವಾದದ್ದಾಗಿದೆ. ಶಸಾಪದ ಎಲ್ಲ ಪದಾಧಿಕಾರಿಗಳು, ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತ ಶರಣರ ಚಿಂತನೆ, ಬದುಕು, ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಕಾರ್ಯ ನಡೆಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದಾರೆ ಎಂದರು.
ಸ್ಥಳ ದಾಸೋಹಿ ಸಂಗಣ್ಣ ಕಂಚ್ಯಾಣಿ, ಮಹಾದೇವಿ ಕಂಚ್ಯಾಣಿ, ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ಮಹಾದೇವಿ ನಾಲತವಾಡ ದಂಪತಿಯನ್ನು ಹಾಗೂ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದವರನ್ನು ಸನ್ಮಾನಿಸಲಾಯಿತು. ಮಹಾದೇವಿ ಕಂಚ್ಯಾಣಿ, ಶೈಲಜಾ ಕಂಚ್ಯಾಣಿ, ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ರಾಂಪೂರ ಸೇರಿ ಹಲವರು ವೇದಿಕೆಯಲ್ಲಿದ್ದರು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಎಸ್.ಎ.ಬೇವಿನಗಿಡದ ಸ್ವಾಗತಿಸಿದರು. ರುದ್ರೇಶ ಕಿತ್ತೂರ ಗ್ರಂಥ ಪರಿಚಯಿಸಿದರು. ಸಿದ್ದನಗೌಡ ಬಿಜ್ಜೂರ ನಿರೂಪಿಸಿದರು. ಸಿ.ಜಿ.ನಾಗರಾಳ ವಂದಿಸಿದರು. ಕಾರ್ಯಕ್ರಮದಲ್ಲಿ ಶರಣಪ್ಪ ಕಂಚ್ಯಾಣಿಯವರನ್ನು ಸ್ಮರಿಸಿ ಬಸವ ಭಾವಪೂಜೆ ನೆರವೇರಿಸಲಾಯಿತು.

ಎರಡು ವಿಚಾರಗೋಷ್ಠಿಗಳು:
ಡಾ|ಬೋರಮ್ಮ ರಾಂಪೂರ(ಪೊಲೀಸ್‌ಪಾಟೀಲ) ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಚಿಂತನೆ ಗೋಷ್ಠಿಯಲ್ಲಿ ವಿಜಯಪುರದ ಮೋಹನ ಕಟ್ಟಿಮನಿಯವರು ಶರಣ ಸಾಹಿತ್ಯ ಮತ್ತು ಸಂಸ್ಕೃತಿಯ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ಲಲಿತಾ ಕಟಗೇರಿ, ರಶ್ಮಿ ಕೊಪ್ಪ ವಕೀಲರು ವೇದಿಕೆಯಲ್ಲಿದ್ದರು. ಮಹಾದೇವಿ ನಾಲತವಾಡ ಸ್ವಾಗತಿಸಿದರು. ಸರೋಜಾ ಕೋರಿ ನಿರೂಪಿಸಿದರು. ಮಹಾದೇವಿ ಕಿಣಗಿ ವಂದಿಸಿದರು. ಬಾಪುಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ವಚನ ಗಾಯನ ಗೋಷ್ಠಿಯಲ್ಲಿ ಸಂಗಮೇಶ ಶಿವಣಗಿ, ಕಾಳಮ್ಮ ಬಡಿಗೇರ, ಲಕ್ಷ್ಮಿ ಇಳಕಲ್ ತಂಡದವರು ಶರಣರ ವಚನ ಸಂಗೀತ ಗಾಯನ ನಡೆಸಿಕೊಟ್ಟರು. ಡಾ|ಬಲವಂತ ಪೊಲೀಸ್‌ಪಾಟೀಲ, ಎನ್.ಆರ್.ಮೊಕಾಶಿ ವಕೀಲರು, ಪ್ರೊ|ಅರವಿಂದ ಕಂಚ್ಯಾಣಿ ವೇದಿಕೆಯಲ್ಲಿದ್ದರು.

ಮಂಗಲೋತ್ಸವ:
ಸಂಜೆ ನಡೆದ ಮಂಗಲೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ, ಮುಖ್ಯ ಅತಿಥಿಗಳಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಉಪನ್ಯಾಸಕಿ ಅನ್ನಪೂರ್ಣ ಕಿತ್ತೂರ ಮಾತನಾಡಿ ಶಸಾಪ, ಕದಳಿ ವೇದಿಕೆಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ಬಿ.ವಿ.ಕೋರಿ ನಿರ್ವಹಿಸಿದರು.

ಶಸಾಪ ಜಿಲ್ಲಾ ಘಟಕದಿಂದ ತಾಲೂಕು ಘಟಕದಲ್ಲಿ ಕ್ರಿಯಾಶೀಲರಾಗಿ ಕಾರ್ಯಪ್ರವೃತ್ತರಾದವರಿಗೆ ರಾಜೇಂದ್ರ ಪ್ರಶಸ್ತಿ ಜೊತೆಗೆ ರೂ.೫೦೦೦ ನಗದು ಬಹುಮಾನ ಕೊಡುತ್ತಿರುವುದು ರಾಜ್ಯದಲ್ಲಿಯೇ ಅತ್ಯಂತ ಹೆಮ್ಮೆಯ ವಿಷಯವಾಗಿದೆ.
-ಜಂಬುನಾಥ ಕಂಚ್ಯಾಣಿ, ಜಿಲ್ಲಾಧ್ಯಕ್ಷರು, ಶರಣ ಸಾಹಿತ್ಯ ಪರಿಷತ್, ವಿಜಯಪುರ.

ಪ್ರತಿ ತಿಂಗಳು ನಡೆಯುವ ಹುಣ್ಣಿಮೆಯ ಕಾರ್ಯಕ್ರಮಗಳು ಧಾರ್ಮಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಶರಣರನ್ನು ಪರಿಚಯಿಸಿ ಶರಣರ ದಾರಿಯಲ್ಲಿ ನಡೆಯುವ ಮನಸ್ಸುಗಳನ್ನು ಜಾಗೃತಗೊಳಿಸುವಂಥವುಗಳಾಗಿವೆ. ಇಲ್ಲಿ ದೊರೆಯುವ ಸಂದೇಶಗಳು ಬಾಳಿಗೆ ದಾರಿದೀಪಗಳಾಗುತ್ತವೆ.
-ಕಾಶಿಬಾಯಿ ರಾಂಪೂರ, ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ, ಮುದ್ದೇಬಿಹಾಳ.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें